Saturday 24 January 2009

ಗ್ರಾ. ಪಂ.: ಅಧಿಕಾರದ ವಿಕೇಂದ್ರೀಕರಣವೋ ಭ್ರಷ್ಟಾಚಾರದ ಸರಳೀಕರಣವೋ?

ಭ್ರಷ್ಟಾಚಾರ ಎಲ್ಲಿಂದ ಆರಂಭವಾಗುತ್ತದೆ? ಎಲ್ಲಿ ಜನ ಸಾಮಾನ್ಯರ ಕೈಗೆ ಆದಳಿತ ಕೊಟ್ಟು ಅಧಿಕಾರದ ರುಚಿ ತೋರಿಸಲಾಯಿತೋ ಅಲ್ಲಿಂದಲೇ ಶುರುವಾಗುತ್ತದೆ. ನಿಜ ಸಾಮಾನ್ಯನೂ ಆದಳಿತದಲ್ಲಿ ಪಾಲ್ಗೊಳ್ಳಲೆಂದು ಸ್ಥಾಪಿಸಲಾದ ಗ್ರಾಮ ಪಂಚಾಯತ್ ಭ್ರಷ್ಟಾಚಾರದ ಉಗಮಸ್ಥಾನವಾಗಿದೆ. ಇಷ್ಟೆಲ್ಲಾ ಯಾಕೆ ನೆನಪಾಯಿತೆಂದರೆ ಗೂಗಲ್ ಸಂಸ್ಥೆ ಗ್ರಾ. ಪಂ. ಗಳಿಗೆ ಪ್ರಶಸ್ತಿ ನೀಡಲು ಹೊರಟಿದೆ. ಉತ್ತಮ ಗ್ರಾ. ಪಂ. ಆರಿಸುವುದೂ ಕಷ್ಟದ ಸಂಗತಿಯೇ.
ಅಧಿಕಾರದ ರುಚಿ ತೋರಿಸಲು ಗ್ರಾ. ಪಂ. ಸ್ಥಾಪಿಸಲಾಯಿತು. ನಂತರ ಸದಸ್ಯರುಗಳಿಗೆ ಭ್ರಷ್ಟಾಚಾರದ ಪಾಠ ಮಾಡಲು ಸೆಕ್ರೆಟರಿ ನೇಮಕ ಮಾಡಲಾಯಿತು. ಜನ ಪ್ರತಿನಿಧಿಗಳ ಖರೀದಿ ವ್ಯವಹಾರಗಳನ್ನು ರಾಷ್ಟ್ರೀಯ ಪಕ್ಷಗಳು ಆರಂಭಿಸಿರಬಹುದು, ಆದರೆ ಅದನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗುತ್ತಿರುವವರು ಗ್ರಾ. ಪಂ. ಜನಗಳು. ಏಕೆಂದರೆ ಇಲ್ಲಿ ಒಂದು ಚುನಾವಣೆಗೆ ಎರಡು ಬಾರಿ ಅಧ್ಯಕ್ಷರಾಗುತ್ತಾರೆ. ಒಮ್ಮೆ ಎರಡೂವರೆ ವರ್ಷಗಳ ಅವಧಿಗೆ. ಒಬ್ಬೊಬ್ಬ ಸದಸ್ಯನಿಗೆ ಹತ್ತುಸಾವಿರವೆಂದರೆ ಕಡಿಮೆಯೇ. ಐವತ್ತಾದರೂ ಆಶ್ಚರ್ಯವಿಲ್ಲ. ಉದ್ಘಾರ ಬೇಡ. ಲಾಭ ಇಲ್ಲದೇ ಇಷ್ಟೆಲ್ಲಾ ನಡೆಯದು. ಚಿಕ್ಕ ಪುಟ್ಟ ಯೋಜನೆಗಳಿಗೆ ಹರಿದು ಬರುವ ಮೊತ್ತವೇನು ಕಡಿಮೆಯೇ? ಕುಮಟಾದ ಗ್ರಾ. ಪಂ. ಒಂದರಲ್ಲಿ ಹಾಲೀ ಅಧ್ಯಕ್ಷನನ್ನು ಕೆಳಗಿಳಿಸಲು ಮಾಡಿದ ಸರ್ಕಸ್ ಪತ್ರಿಕೆಗಳಲ್ಲೆಲ್ಲ ವರದಿಯಾಗಿತ್ತು. ಸದಸ್ಯರ ಅಪಹರಣದ ತನಕ ನಾಟಕ ನಡೆದಿತ್ತು.
ಮೊದಲೇ ಹೇಳಿದೆನಲ್ಲ. ಗ್ರಾ. ಪಂ. ಒಂದರಲ್ಲಿ ಅನುಭವಿ ವ್ಯಕ್ತಿ ಎಂದರೆ ಸೆಕ್ರೆಟರಿ. ಅವನೇ ರೂಲ್ ಮೇಕರ್. ಸಿದ್ದಾಪೂರದ ಗ್ರಾ. ಪಂ. ಒಂದರಲ್ಲಿ ಒಬ್ಬ ಸೆಕ್ರೆಟರಿ ಇದ್ದಾನೆ. ಅಧ್ಯಕ್ಷ ಮೀಸಲು ಸದಸ್ಯ. ಆತ ಸಹಿ ಹಾಕಲು ಮೀಸಲು. ಇಲ್ಲಿ ಎಂಥ ಅಭಿವೃಧ್ಧಿ ಎಂದರೆ: ಅತೀ ಹಿಂದುಳಿದವರ ಮನೆಗಳಿಗೆ ಶೌಚಾಲಯ ನಿರ್ಮಣ ಎನ್ನುವ ಒಂದು ಯೋಜನೆ ಬಂದಿತ್ತು. ಒಂದು ಹೊಂಡ ತೋಡಿ ಅದರ ಮೇಲೆ ಕಮೋಡ್ ಇರಿಸಿ ಬಿಲ್ ಕೂಡ ಪಾಸ್ ಆಯಿತು. ಈಗ ಫಲಾನುಭವಿಗಳು ಅದರ ಅಕ್ಕ ಪಕ್ಕಾ ಗೋಡೆ ಕಟ್ಟಿಕೊಳ್ಳಬೇಕು.
ಇನ್ನೊಬ್ಬ ಪನಿಷ್ಮೆಂಟ್ ಟ್ರಾನ್ಸ್ಫರ್ ಮೇಲೆ ಊರೂರು ಸುತ್ತುತ್ತಿರುವವ ಸೆಕ್ರೆಟರಿ, ಊರ ಹಿರಿಯರೊಬ್ಬರು ಪರವಾನಿಗೆ ಇಲ್ಲದೇ ತೋಟದ ಮನೆ ಕಟ್ಟಿದ್ದಕ್ಕೆ ಫೈನ ಹಾಕುತ್ತೇನೆಂದು ಹೆದರಿಸಿ ಜೇಬು ತುಂಬಿದರೆ ಹಿಂದಿನ ದಿನಾಂಕಕ್ಕೆ ಪರವಾನಿಗೆ ನೀಡುತ್ತೇನೆಂದಿದ್ದ. ಉದ್ಯೋಗ ಖಾತರಿ ಯೋಜನೆಗೆ ಬರುವ ಅಕ್ಕಿ ಎಲ್ಲೆಲ್ಲಿ ಮಾರಾಟವಾಗುವುದೋ ದೇವರೇ ಬಲ್ಲ. ಪಡಿತರ ಸೀಮೆ ಎಣ್ಣೇಗೆ ನೀಲಿ ಬಣ್ಣ ಬಳಿದಂತೆ ಅಕ್ಕಿಗೆ ಯಾವ ಬಣ್ಣ ಬಳಿಯುವುದೋ? ಹೀಗಿದೆ ನಮ್ಮ ಗ್ರಾಮ ಪಂಚಾಯತ್ ಆಡಳಿತ. ಎಲ್ಲ ಹೀಗೆ ಎಂದೇನಿಲ್ಲ. ಆದರೂ ಗ್ರಾ. ಪಂ. ಈಗ ಅಧಿಕಾರದ ವಿಕೇಂದ್ರೀಕರಣವೋ ಭ್ರಷ್ಟಾಚಾರದ ಸರಳೀಕರಣವೋ ನೀವೇ ಹೇಳಿ.
Keywords: Gram Panchayat, Bribery, Government, Job guaranty, Kumta, Siddapur, UttaraKannada, Politics, Google

No comments:

Search Rising Indian


Related Posts Plugin for WordPress, Blogger...